ಡಿ.ಸಿ ನಾದಿನಿ ಮನೆ ನೆಲಸಮ
ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಅವರ ನಾದಿನಿಯ (ಪತ್ನಿಯ ಸೋದರಿ) ಮನೆಯನ್ನೂ ನೆಲಸಮ ಮಾಡಲಾಗಿದೆ.
ಸಾರಕ್ಕಿ ಕೆರೆಗೆ ಸೇರಿದ 33 ಎಕರೆ ಜಾಗದಲ್ಲಿದ್ದ 178 ಮನೆಗಳಲ್ಲಿ ನಾದಿನಿಯ ಮನೆಯೂ ಇತ್ತು. ಅದನ್ನು ಎರಡನೇ ದಿನವೇ ನೆಲಸಮ ಮಾಡಲಾಗಿದೆ. ತೆರವು ಮಾಡದಂತೆ ಮನೆಯವರು ಮಾಡಿದ ಮನವಿಗೆ ಜಿಲ್ಲಾಧಿಕಾರಿ ಸ್ಪಂದಿಸಲಿಲ್ಲ. ಕೆರೆ ಜಾಗ ಉಳಿಯಬೇಕು ಎಂಬುದು ಅವರ ಸೂಚನೆಯಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಕೆರೆಗೆ ಸೇರಿದ ಜಾಗದಲ್ಲಿ ಸಂಬಂಧಿಯ ಜಾಗ ಇದ್ದುದು ನಿಜ. ಕೆರೆಗೆ ಸೇರಿದ ಪ್ರತಿ ಇಂಚು ಜಾಗವೂ ಸರ್ಕಾರದ ವಶಕ್ಕೆ ಬರಬೇಕು. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯಾಚರಣೆ ನಡೆಸಲಾಗಿದೆ. ಆದರೂ, ಕೆಲವು ಒತ್ತುವರಿದಾರರು ತಡೆಯಾಜ್ಞೆ ತಂದಿದ್ದಾರೆ. ಅದನ್ನು ತೆರವು ಮಾಡಿ ನೆಲಸಮ ಮಾಡುವುದು ಖಚಿತ’ ಎಂದು ವಿ.ಶಂಕರ್ ತಿಳಿಸಿದರು.