ಅಭಿಮಾನ್ ಸ್ಟುಡಿಯೋದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ

ಬೆಂಗಳೂರು: ಡಾ.ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲೇ ಅವರ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಸಮಾಧಿ ಇರುವ ಸ್ಥಳಕ್ಕೆ ಹೊಂದಿಕೊಂಡಂತೆ ಇರುವ 2 ಎಕರೆ ಜಮೀನನ್ನು ಬಿಟ್ಟು ಕೊಡಲು ಅಭಿಮಾನ್ ಸ್ಟುಡಿಯೋ ಮಾಲೀಕರು (ಬಾಲಕೃಷ್ಣ ಅವರ ಪುತ್ರರು) ಒಪ್ಪಿಗೆ ನೀಡಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ನೀಡಿದ್ದರಿಂದ ಉಂಟಾಗಿದ್ದ ವಿವಾದ ಈಗ ಬಗೆಹರಿದಂತಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ದಕ್ಷಿಣ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಇರುವ ಅಭಿಮಾನ್
ಸ್ಟುಡಿಯೋ 10 ಎಕರೆ ವ್ಯಾಪ್ತಿಯಲ್ಲಿದೆ. ಈ ಸ್ಟುಡಿಯೋದಲ್ಲಿನ ಸರ್ವೇ ನಂ.22ರಲ್ಲಿ ಇರುವ 2 ಎಕರೆ ಜಾಗವನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸ್ಟುಡಿಯೋ ಮಾಲೀಕರಾದ ಬಾಲಕೃಷ್ಣ ಕುಟುಂಬದ ಸದಸ್ಯರು ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ ಉಳಿದಿದೆ. ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರಿಗೆ ಮಾಹಿತಿ ನೀಡಿದ್ದು, ವಿವಾದ ಬಗೆಹರಿದಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು. 2 ವರ್ಷದಿಂದ ವಿಷ್ಣು ಸ್ಮಾರಕ ನಿರ್ಮಾಣ ವಿವಾದದಲ್ಲಿತ್ತು. ಈ ಹಿಂದೆ ಹಂಚಿಕೆ ಮಾಡಲಾಗಿದ್ದ ಜಮೀನು ಅರಣ್ಯ ಇಲಾಖೆಗೆ ಸೇರಿತ್ತು. ಆದ್ದರಿಂದ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿಷ್ಣು ಕುಟುಂಬದವರು ಒಪ್ಪಿರಲಿಲ್ಲ.

Leave a Reply

Your email address will not be published. Required fields are marked *

nineteen − 5 =